|

DEBUNKING OF “ಕುರಾನ್ ಭ್ರೂಣಶಾಸ್ತ್ರ “

ಅಧ್ಯಾಯ 3: ಆಲಿ ಇಮ್ರಾನ್ (ಇಮ್ರಾನರ ಸಂತತಿ)ಸೂಕ್ತ : 7 “ಅವನೇ, ಈ ಗ್ರಂಥವನ್ನು ನಿಮಗೆ ಇಳಿಸಿಕೊಟ್ಟವನು. ಇದರಲ್ಲಿ ಖಚಿತ ವಚನಗಳಿವೆ – ಅವುಗಳೇ ಈ ಗ್ರಂಥದ ಸಾರ. ಇನ್ನು, ಇದರಲ್ಲಿ ಬಹು ಅರ್ಥದ ವಚನಗಳೂ ಇವೆ. ತಮ್ಮ ಮನಸ್ಸುಗಳಲ್ಲಿ ವಕ್ರತೆ ಉಳ್ಳವರು, ಈ ಪೈಕಿ ಬಹು ಅರ್ಥದ ವಚನಗಳ ಹಿಂದೆ ನಡೆಯುತ್ತಾರೆ. ಅವರು ಈ ಮೂಲಕ ಗೊಂದಲದ ಬೆನ್ನು ಹಿಡಿಯುತ್ತಾರೆ ಮತ್ತು ವಿಕೃತ ವ್ಯಾಖ್ಯಾನಗಳನ್ನು ಅರಸುತ್ತಿರುತ್ತಾರೆ. ನಿಜವಾಗಿ, ಅವುಗಳ ಸರಿಯಾದ ವ್ಯಾಖ್ಯಾನವನ್ನು ಬಲ್ಲವನು ಅಲ್ಲಾಹನ ಹೊರತು ಬೇರಾರೂ ಇಲ್ಲ. ಪಕ್ವವಾದ ಜ್ಞಾನ ಉಳ್ಳವರು ಮಾತ್ರ, ‘‘ನಾವು ಇದನ್ನು ನಂಬಿರುವೆವು, ಇದೆಲ್ಲವೂ ನಮ್ಮೊಡೆಯನ ಕಡೆಯಿಂದಲೇ ಬಂದಿದೆ’’ ಎನ್ನುತ್ತಾರೆ. ನಿಜವಾಗಿ ಬುದ್ಧಿವಂತರ ಹೊರತು ಬೇರಾರೂ ಪಾಠ ಕಲಿಯುವುದಿಲ್ಲ.”

ಕುರಾನ್ ಗ್ರಂಥವನ್ನು ಅಲ್ಲಾಹು ಮಹಮ್ಮದರಿಗೆ ಇಳಿಸಿ ಕೊಟ್ಟನು. ಮತ್ತು ಅದರ ಆರ್ಥ ವ್ಯಾಖ್ಯಾನವು ಮಹಮ್ಮದರು ತಮ್ಮ ಸ್ವಹಾಬಿಗಳಿಗೆ ಅತ್ಯಂತ ಸರಿಯಾದ ರೀತಿಯಲ್ಲಿ ವಿವರಿಸಿ ಕೊಟ್ಟರು ಎಂದು ಹೇಳಿದರೆ ಅದನ್ನು ವಿರೋಧಿಸುವ ಯಾವ ಮುಸ್ಲಿಮನು ಸಿಗಲು ಸಾಧ್ಯವಿಲ್ಲ. ಯಾಕೆಂದರೆ ಪ್ರವಾದಿ ಮಹಮ್ಮದ್ ಇಸ್ಲಾಮಿನ ಪರಮೋಚ್ಚ ಜ್ಞಾನದ ಸ್ಥಂಭ. ಆದರೆ ಅಂದು ಮಹಮ್ಮದರಿಗೂ ಸಿಗದ ಕುರಾನ್ ವ್ಯಾಖ್ಯಾನ ಇಂದಿನ ಸಾಮಾನ್ಯ ಮುಲ್ಲಗಳಿಗೆ, ಕುರಾನ್ ಓದದ, ಅರೇಬಿಕ್ ಭಾಷೆ ಬಾರದ ಜನಕ್ಕೆ ಸಿಗಲು ಸಾಧ್ಯವೆ ? ಇಲ್ಲ. ಸಾಧ್ಯವಿಲ್ಲ. ಅದನ್ನು ಸ್ವತಃ ಕುರಾನ್ ಹೇಳುತ್ತದೆ.

ಮತ್ತೊಮ್ಮೆ ಮೇಲಿನ ಕುರಾನ್ ವಾಕ್ಯವನ್ನು ಓದಿ. …”ತಮ್ಮ ಮನಸ್ಸುಗಳಲ್ಲಿ ವಕ್ರತೆ ಉಳ್ಳವರು, ಈ ಪೈಕಿ ಬಹು ಅರ್ಥದ ವಚನಗಳ ಹಿಂದೆ ನಡೆಯುತ್ತಾರೆ. ಅವರು ಈ ಮೂಲಕ ಗೊಂದಲದ ಬೆನ್ನು ಹಿಡಿಯುತ್ತಾರೆ ಮತ್ತು ವಿಕೃತ ವ್ಯಾಖ್ಯಾನಗಳನ್ನು ಅರಸುತ್ತಿರುತ್ತಾರೆ. ನಿಜವಾಗಿ, ಅವುಗಳ ಸರಿಯಾದ ವ್ಯಾಖ್ಯಾನವನ್ನು ಬಲ್ಲವನು ಅಲ್ಲಾಹನ ಹೊರತು ಬೇರಾರೂ ಇಲ್ಲ. ಹೇಳಲು ಹೊರಟಿರುವುದು ಭ್ರೂಣಶಾಸ್ತ್ರದ ಬಗ್ಗೆ. ಅಂದು ಅಲ್ಲಾಹುವಿಗೂ ಪ್ರವಾದಿ ಮಹಮ್ಮದನಿಗೂ ಗೊತ್ತಿಲ್ಲದ ವಿಚಾರವನ್ನು ಭಾಷೆಯ ಕೊರತೆಗಳನ್ನು ಬಳಸಿ ಈ ಶತಮಾನದಲ್ಲಿ ಪ್ರೂವ್ ಮಾಡಿದ ಕಥೆಯ ವಿಶ್ಲೇಷಣೆ. ಅಲ್ಲಾಹು ಕಾಣದ್ದನ್ನು ಮಹಮ್ಮದ್ ಕಂಡ ಮಹಮ್ಮದ್ ಕಾಣದ್ದನ್ನು ಕೀತ್ ಮೂರ್ ಕಂಡ ಅವನೂ ಕಾಣದ್ದನ್ನು ಜಾಕೀರ್ ನಾಯ್ಕ ಕಂಡ. ಈ confirmation bias ಅನ್ನು ಕೆಡವುವ ಲೆನ್ತಿ ಕ್ರಿಯೆಯೇ Brandolini’s law ಅಥವಾ bullshit asymmetry principle. ಇದರ ವಿವರಣೆ ಇನ್ನೊಂದು ಬರಹದಲ್ಲಿ ನೋಡೋಣ.

ಕುರಾನಿನ ಹಲವು ಕಡೆಗಳಲ್ಲಿ ಮನುಷ್ಯನ ಸೃಷ್ಟಿಯ ಕುರಿತಾಗಿ ವಿವರಿಸಲಾಗಿದೆ. ಮೊದಲು ಮಾನವನನ್ನು ನಯವಾದ ಮಣ್ಣಿನಿಂದ ನಿರ್ಮಿಸಲಾಯಿತು(23:12) ಆ ಬಳಿಕ ನಾವು ಅವನನ್ನು ವೀರ್ಯದ ರೂಪದಲ್ಲಿ ಒಂದು ಸ್ಥಿರವಾದ ಸ್ಥಾನದಲ್ಲಿ ನೆಲೆಸಿದೆವು.(23:13) ಎಂದು ವಿವರಿಸಲಾಗಿದೆ. ಈ ಅಸಂಬದ್ಧ ಸೃಷ್ಟಿಯ ವಿಚಾರವನ್ನು ಮತ ಪ್ರಚಾರಕರು ವಿಜ್ಞಾನೀಕರಿಸಲು ಹೊರಡುವುದಿಲ್ಲ. ಡಾರ್ವಿನ್ನನ ವಿರುದ್ಧ ತಂದು ನಿಲ್ಲಿಸಲು ಸರಿಯಾದ ಯಾವುದೇ ಸಾಕ್ಷಿ ತರಲು ಸಾಧ್ಯವಿಲ್ಲದ ಕಾರಣ “ನೀವು ಮಂಗಗಳ ವಂಶದವರು ಎಂದು ನಂಬುತ್ತೀರಾ ? ಮಂಗಗಳು ಮನುಷ್ಯರಾಗಿದ್ದಾರೆ ಅಂದರೆ ಇಂದಿಗೂ ಮಂಗಗಳು ಯಾಕೆ ಇವೆ? ಅವು ಯಾಕೆ ಮನುಷ್ಯರಾಗಿ ಬದಲಾಗುತ್ತಿಲ್ಲ?” ಎಂದೆಲ್ಲ ವಿಡಂಬನೆಯೊಂದಿಗೆ ಕೇಳುತ್ತಾರೆ. ಅಲ್ಲಿಗೆ ವಿಕಾಸವಾದದ ಬಗ್ಗೆ ಗಂಧಗಾಳಿ ಇಲ್ಲದ ಅವರಿಗೆ ಉತ್ತರ ನೀಡುವುದೇ ವ್ಯರ್ಥ ಅನ್ನಿಸುತ್ತದೆ. ಯಾಕಂದರೆ ಈ ಪ್ರಶ್ನೆ ಕೇಳುವ ವ್ಯಕ್ತಿ ಉತ್ತರ ಕೇಳಲು , ಆರ್ಥ ಮಾಡಿಕೊಳ್ಳಲು ಸಿದ್ಧನಿರುವುದಿಲ್ಲ. ಅವನಿಗೆ ಏನಾದರೂ ಆಗಲಿ ನಾನು ಮಂಗನ ವಂಶದವನಲ್ಲ ಎಂಬ ನಂಬಿಕೆಯೂ, ಅದನ್ನು ಸಾಧಿಸುವ ಹಠವು ಇರುತ್ತದೆ.

ಮುಂದೆ ಕುರಾನ್ (23:14) (22:5) (75:37,38) (96:2) ಮಾನವನ ಗರ್ಭಾವಸ್ಥೆಯ ಬಗ್ಗೆ ವಿವರಿಸುತ್ತದೆ. ಈ ಸಂದರ್ಭದಲ್ಲಿ ಕೆಲವು ಪದಗಳ ವಿವರಣೆ ಅಗತ್ಯ;

  1. ನೂತ್ಫಾ(نُطْفَةً) – ಅಲ್ಪ ಪ್ರಮಾಣದ ದ್ರವ.
  2. ಅಲಕಾ(علقة) – ರಕ್ತ ಗಟ್ಟೆ, ನೇತಾಡುವ ಜಿಗಣೆಯಂತಹ ವಸ್ತು. (ನಿಜವಾದ ಅರ್ಥ ಕೊನೆಯಲ್ಲಿ ನೋಡೋಣ)
  3. ಮುದ್ಗ(مُدْغَة) – ಜಗಿಯಲು ಸಾಧ್ಯವಿರುವ ಗಾತ್ರದ ಮಾಂಸದ ಮುದ್ದೆ.

ಅಲ್ಲಾಹುವಿನ ವಿವರಣೆಯಂತೆ ಮನುಷ್ಯನ ಸೃಷ್ಟಿ ಮೊದಲು ಮಣ್ಣಿಂದಲೂ ನಂತರ ದ್ರವರೂಪದ ವೀರ್ಯದಿಂದಲೂ, ಮುಂದೆ ಅದು ಗರ್ಭದಲ್ಲಿ “ಅಲಕಾ”ವಾಗಿಯೂ ನಂತರ “ಮುದ್ಗ”ವಾಗಿಯು ಮುಂದಕ್ಕೆ ಅದು ಎಲುಬಾಗಿಯೂ ಪರಿವರ್ತನೆಗೊಂಡು ಮುಂದಿನ ಹಂತದಲ್ಲಿ ಎಲುಬಿಗೆ ಮಾಂಸದ ಉಡುಗೆಯನ್ನು ತೋಡಿಸಲಾಯಿತು. ನಂತರ ಒಂದು ಹೊಸ ರೂಪದಲ್ಲಿ ಮನುಷ್ಯನನ್ನು ಸೃಷ್ಟಿಸಲಾಗುತ್ತದೆ. ಆಧುನಿಕ ಶಾಸ್ತ್ರದ ವಿವರಣೆಯ ಹತ್ತಿರಕ್ಕೂ ಈ ವಿವರಣೆ ಬರುವುದಿಲ್ಲ. ಸ್ತ್ರೀಯನ್ನು ಪ್ರವೇಶಿಸಿದ ಲಕ್ಷಾಂತರ ವೀರ್ಯಾಣುಗಳ ವಿವರಣೆ ಕುರಾನಿನಲ್ಲಿ ಎಲ್ಲಿಯೂ ಸಿಗುವುದಿಲ್ಲ. ವೀರ್ಯಾಣುವಿನ ರೂಪವಾಗಲಿ, ಅಂಡಾಣುವಿನ ರೂಪವಾಗಲೀ ವಿವರಣೆಯೇ ಇಲ್ಲ. ಕಣ್ಣಿಗೆ ಕಾಣದ ವೀರ್ಯಾಣುವಿನ ರೂಪವನ್ನು ಅಲ್ಲಾಹು ಹೇಗೆ ತಾನೇ ವಿವರಿಸಬಲ್ಲ ?

ಕುರಾನ್ ಮತ್ತು ಹದೀಸುಗಳ ಪ್ರಕಾರ ಸ್ತ್ರೀಯ ಗರ್ಭವನ್ನು ಪ್ರವೇಶಿಸಿದ ವೀರ್ಯಾಣು 40 ದಿನಗಳ ತನಕ ಅಲ್ಲಿ ಭದ್ರವಾಗಿ ಇರುತ್ತದೆ ನಂತರ ಅದು ರಕ್ತದ ಗಟ್ಟೆಯಾಗಿ ಜಿಗಣೆಯ ಗಾತ್ರದಲ್ಲಿ ಗರ್ಭಕ್ಕೆ ಕರುಳುಬಳ್ಳಿಯ ಸಹಾಯದೊಂದಿಗೆ ನೇತಾಡುತ್ತದೆ. ನಿಜವಾಗಿ ಹೇಳಬೇಕೆಂದರೆ ಈ ಜಿಗಣೆಯ ಆಕೃತಿಯ ನೇತಾಡುವ ವಸ್ತು ಎನ್ನುವ ವಿವರಣೆ ಯಾವ ಪೂರ್ವಸೂರಗಳ ಕುರಾನ್ ವಿವರಣೆಯಲ್ಲಾಗಲಿ, ಹದೀಸ್ ವಿಷಧೀಕರಣದಲ್ಲಾಗಲಿ ಸಿಗುವುದಿಲ್ಲ. ಆಧುನಿಕ ಪ್ರಚಾರಕರು ಕುರಾನಿನಲ್ಲಿ ಮಾಡಿದ ಆರ್ಥ ವ್ಯತ್ಯಾಸಕ್ಕೆ ಇದು ಪ್ರತ್ಯಕ್ಷ ಸಾಕ್ಷಿ. ಇಲ್ಲಿ ಮಹಮದನಿಗೆ ಅರ್ಥವಾಗದ ಅರಿವನ್ನು ಕೀತ್ ಮೂರ್, ಜಾಕೀರ್ ನಾಯ್ಕ ಕೊಡುತ್ತಾರೆ.

ಇಬ್ನ್ ಕತೀರ್ ಮತ್ತು ಇಬ್ನ್ ಅಬ್ಬಾಸರ ತಫ್ಸೀರ್’ಗಳಲ್ಲಿ ಅವರೀರ್ವರು “ಅಲಕಾ” ಎನ್ನುವ ಪದಕ್ಕೆ “ಬ್ಲಡ್ ಕ್ಲೋಟ್” ಅನ್ನುವ ವಿವರವನ್ನೇ ನೀಡಿದ್ದಾರೆಯೇ ಹೊರತು ಜಿಗಣೆ ರೀತಿಯ ವಸ್ತು ಎನ್ನುವ ವಿವರಣೆ ಸಿಗುವುದಿಲ್ಲ. ಇಲ್ಲಿ ಆಧುನಿಕ ದಾಯಿಗಳೂ ಕುರಾನ್ ಸಮರ್ಥನೆಗಾಗಿ ಅರೇಬಿಕ್ ಭಾಷೆಯನ್ನು ತಿದ್ದುವ ಕೆಲಸ ಮಾಡಿದ್ದು ಕಾಣಿಸುತ್ತದೆ. ಇದಕ್ಕೂ ಮೀರಿ ಕುರಾನ್ ವಿವರಣೆಯನ್ನು ಸರಿಯಾಗಿಸುವ ನಿಟ್ಟಿನಲ್ಲಿ ಜಿಗಣೆ ರಕ್ತ ಹೀರುತ್ತದೆ ಅದೇ ರೀತಿ ಭ್ರೂಣ ತಾಯಿಯ ರಕ್ತವನ್ನು ಪಡೆಯುತ್ತದೆ ಎಂದು ಆಧುನಿಕ ದಾಯಿಗಳು ಆರ್ಥ ಕೊಡುತ್ತಾರೆ. ನಿಜ ಹೇಳಬೇಕೆಂದರೆ ಈ ಹಂತದಲ್ಲಿ ಭ್ರೂಣ ಜಿಗಣೆ ರೂಪದಲ್ಲಿ ಕಾಣುವುದೇ ಇಲ್ಲ. ಮತ್ತು ಈ ರೂಪ ಸದೃಷ್ಯವನ್ನು ನೀಡಲು ಭ್ರೂಣದ ಹೃದಯ ಭಾಗವನ್ನು ತೆಗೆದು ಪಕ್ಕದಲ್ಲಿ ಜಿಗಣೆಯನ್ನು ಇರಿಸಿದ ನೂರಾರು ಚಿತ್ರಗಳು ಸಿಗುತ್ತವೆ.

ನಲವತ್ತು ದಿನಗಳ ತನಕ ಗರ್ಭದಲ್ಲಿ ಆರಾಮವಾಗಿ ಇರುವ, ಅಲ್ಲಾಹುವಿಗೆ ಮಾತ್ರ ಗೊತ್ತಿರುವ ವೀರ್ಯವನ್ನು ವಿಜ್ಞಾನಿಗಳು ಕಂಡುಹಿಡಿಯಬೇಕಿದೆ. ಇಸ್ಲಾಮಿನ ಪ್ರಕಾರ ಇಂತಹದು ಇರಲೂ ಸಾಧ್ಯವಿದೆ, ಯಾಕೆಂದರೆ ಹದೀಸ್ ಮತ್ತು ಇಸ್ಲಾಮಿಕ್ ಕರ್ಮಶಾಸ್ತ್ರದ ಗ್ರಂಥಗಳು ಎರಡು ವರ್ಷದ ತನಕ ಗರ್ಭ ಇರುವ ಸಾಧ್ಯತೆಯನ್ನು ಹೇಳುತ್ತದೆ. ಸಹಿ ಮುಸ್ಲಿಂ 2643 ಕೊಡುವ ವಿವರಣೆಯಂತೆ 80 ದಿನಗಳ ನಂತರ ಅಲ್ಲಾಹುವಿನ ಆಣತಿಯಂತೆ ಆ ಮಾಂಸದ ಮುದ್ದೆಯ ಭವಿಷ್ಯವನ್ನು ಬರೆಯಲು ದೂತನನ್ನು ಕಳಿಸಲಾಗುತ್ತೆ. ವಿಚಿತ್ರವೆಂದರೆ ಆಧುನಿಕ ಶಾಸ್ತ್ರದ ಪ್ರಕಾರ ಫಲವತ್ತತೆಯ ಸಮಯದಲ್ಲೇ ಮಗುವಿನ ಲಿಂಗ ನಿರ್ಣಯ ನಡೆದಿರುತ್ತದೆಯೇ ಹೊರತು ತಿಂಗಳುಗಳ ನಂತರವಲ್ಲ. ಇವೆಲ್ಲದರ ನಡುವೆ ಅಲ್ಲಹುವಿಗೆ ತೃತೀಯ ಲಿಂಗದ ಬಗ್ಗೆ ಗೊತ್ತಿರಲೇ ಇಲ್ಲ ಎನ್ನುವುದು ಹಾಸ್ಯಾಸ್ಪದ ವಿಚಾರ.

ಅದ್ಭುತ ಭ್ರೂಣಶಾಸ್ತ್ರಜ್ಞ ಅಲ್ಲಾಹುವಿಗೆ X ಮತ್ತು Y ಕ್ರೋಮೋಸೋಮ್ಗಳ ಗಂಧಗಾಳಿ ಇರಲಿಲ್ಲ. ಮುಂದಿನ ಹಂತದಲ್ಲಿ ಈ ಮಾಂಸದ ಮುದ್ದೆ ಎಲುಬಾಗಿ ಅದಕ್ಕೆ ಮಾಂಸದ ಉಡುಗೆಯನ್ನು ತೊಡಿಸಲಾಗಿ ಹೊಸ ರೂಪದಲ್ಲಿ ಮನುಷ್ಯನನ್ನು ನಿರ್ಮಿಸಲಾಗುತ್ತದೆ ಎನ್ನುತ್ತದೆ ಗ್ರಂಥ. ಆದರೆ ಭ್ರೂಣಾವಸ್ಥೆಯಲ್ಲಿ ಮೊದಲು ಎಲುಬು ನಂತರದಲ್ಲಿ ಮಾಂಸ ಎನ್ನುವ ವಿವರಣೆ ತಪ್ಪು. ಮಾಂಸ, ಎಲುಬು, ರಕ್ತ ನಾಳ, ನರಗಳು ಮತ್ತಿತರ ಎಲ್ಲ ಅಂಗಗಳು ಜೊತೆಜೊತೆಯಾಗಿ ಬೆಳೆಯುತ್ತವೆಯೇ ಹೊರತು ಮೂಳೆ ಬೆಳೆದು ಮೇಲೆ ಮಾಂಸದ ಅಂಗಿ ಹಾಕುವುದಲ್ಲ. ಮಕ್ಕಳ ಮೂಳೆಗಳು ಹುಟ್ಟಿದ ನಂತರ ವರ್ಷಗಳ ಕಾಲ ಬೆಳೆಯುತ್ತಲೇ ಇರುತ್ತದೆ. ಎಲುಬುಗಳು ಸಂಪೂರ್ಣವಾಗಿ ಬೆಳೆದಮೇಲೆ ಅದಕ್ಕೆ ಅಂಗಿ ಹಾಕಿದರೆ ಮಗುವಿಗೆ ಗರ್ಭದಿಂದ ಹೊರಬರಲೂ ಅಸಾಧ್ಯ. ಮನುಷ್ಯನ ಗರ್ಭಾವಸ್ಥೆ 2(7?) ವರ್ಷದ ತನಕ ಇರಲು ಸಾಧ್ಯ ಎನ್ನುವ ಇಸ್ಲಾಮಿಕ್ ಗ್ರಂಥಗಳೂ , ಗ್ರಂಥಕಾರರು ಇರುವಾಗ ಇದನ್ನಲ್ಲದೆ ಇನ್ನೇನು ನಿರೀಕ್ಷಿಸಲು ಸಾಧ್ಯ?

ಇಸ್ಲಾಮಿಕ್ ಪಂಡಿತರ ಅಭಿಪ್ರಾಯದಂತೆ ಈ ಭ್ರೂಣಶಾಸ್ತ್ರವು ಕುರಾನಿನ ವೈಜ್ಞಾನಿಕತೆಗೂ ದೈವಿಕತೆಗೂ ಸಾಕ್ಷಿ. ಸರಿಸುಮಾರು 1400 ವರ್ಷಗಳ ಹಿಂದೆ ಇಂತಹ ಶಾಸ್ತ್ರಗಳು ನಿಜವಾಗಿಯೂ ಅದ್ಬುತ ಅನ್ನುವುದು ಅವರ ಅಭಿಪ್ರಾಯ. ಆದರೆ ಈ ವಾದಗಳನ್ನು ಕಾಲದ ಒರೆಗೆ ಹಚ್ಚಿ ನೋಡಿದಾಗ ಈ ದೈವಿಕತೆಯ ಪೊಳ್ಳುತನವು ಅರಿವಾಗುತ್ತದೆ. ಕುರಾನಿನಲ್ಲಿ ಬರುವ ಭ್ರೂಣ ಶಾಸ್ತ್ರ ಇತಿಹಾಸದಲ್ಲಿ ಮೊದಲನೆಯದಂತೂ ಅಲ್ಲವೇ ಅಲ್ಲ. ಅದಕ್ಕೂ ಹಿಂದೆ ಗ್ರೀಕ್ ನಾಗರೀಕತೆಯಲ್ಲಿ, ಭಾರತೀಯ ಆಯುರ್ವೇದ ಶಾಸ್ತ್ರದಲ್ಲಿ ಭ್ರೂಣಶಾಸ್ತ್ರದ ಮೊದಲ ವಿವರಣೆಗಳು ಇನ್ನೂ ಸ್ಪಷ್ಟವಾಗಿ ದೊರೆಯುತ್ತದೆ. ಹಿಪೋಕ್ರಟಿಸ್ ಕೂಡ ಭ್ರೂಣದ ಬೆಳವಣಿಗೆಯ ಬಗ್ಗೆ ವಿವರಣೆ ನೀಡಿದ್ದಾನೆ. ಮುಂದೆ ಅರಿಸ್ಟಾಟಲ್ ಕೂಡ ಮೊಟ್ಟೆಯ ಸಹಾಯದಿಂದ ಭ್ರೂಣದ ಬೆಳವಣಿಗೆಯ ಕುರಿತಾಗಿ ಬರೆದದ್ದು ಸಿಗುತ್ತದೆ. ಇನ್ನೂ ಸ್ಪಷ್ಟವಾಗಿ ಕುರಾನಿನಲ್ಲಿ ಇರುವಂತೆ ಸಿಗುವುದು ಗ್ಯಾಲೆನನ ಬರಹಗಳಲ್ಲಿ. ಕುರಾನಿನಲ್ಲಿ ಇರುವ ದ್ರವ, ರಕ್ತದ ಗಟ್ಟೇ, ಮಾಂಸದ ಸಣ್ಣ ಮುದ್ದೆಯ ವಿವರಗಳನ್ನು ಅದೇ ರೀತಿಯಲ್ಲಿ ಕುರಾನ್ ಅವತೀರ್ಣವಾಗುವ 600 ವರ್ಷಕ್ಕೂ ಹಿಂದೆಯೇ ಗ್ಯಾಲೆನ್ ಬರೆದಿದ್ದ. ಸಾಲದ್ದಕ್ಕೆ ಎಲುಬಿನ ಮೇಲೆ ಮಾಂಸದ ಹೊದಿಕೆಯ ಬಗೆಗೂ ಅದೇ ವಿವರಣೆ ಕೂಡ ಅವನ ಬರಹಗಳಲ್ಲಿ ಸಿಗುತ್ತದೆ. ಹೆಣ್ಣು ಮತ್ತು ಗಂಡು ಲಿಂಗ ನಿರ್ಧಾರ ಲೈಂಗಿಕ ಕ್ರಿಯೆಯ ಉತ್ತುಂಗವನ್ನು ಯಾರು ಮೊದಲು ತಲುಪುತ್ತಾರೋ ಅದರ ಮೇಲೆ ನಿರ್ಧಾರವಾಗುತ್ತದೆ ಎನ್ನುವುದು ಗ್ಯಾಲನನ ನಂಬಿಕೆಯಾಗಿತ್ತು. ಹೆಣ್ಣು ಮೊದಲಾದರೆ ಹೆಣ್ಣು ಮಗುವೂ, ಗಂಡು ಮೊದಲಾದರೆ ಗಂಡು ಮಗುವೂ ಹುಟ್ಟುತ್ತದೆ ಎಂದು ಪ್ರತಿಪಾದಿಸಿದ್ದ. ಇದೇ ಪ್ರತಿಪಾದನೆ ಅದಕ್ಕೂ ಮೊದಲು ಯಹೂದಿಗಳ ತಾಲ್ಮುದ್ ಗ್ರಂಥದಲ್ಲಿಯೂ ಕಾಣಬಹುದು. ಇದನ್ನೇ ಕಾಫಿ ಹೊಡೆದ ವಿವರಣೆ ಹದೀಸಿನಲ್ಲಿ ಮಗುವಿನ ಲಿಂಗದ ಬದಲು ತಂದೆ ಅಥವಾ ತಾಯಿಯ ರೂಪ ಸಾಮ್ಯತೆಯ ಬಗ್ಗೆ ಹೇಳಲಾಗಿದೆ. ಗ್ಯಾಲನ್ ಮಾಡಿದ ಎಲ್ಲ ತಪ್ಪುಗಳು ಅದೇ ರೀತಿ ಕುರಾನಿನಲ್ಲಿ ಕಾಣಬಹುದು.

ಬೇರೆಬೇರೆ ಊರುಗಳಿಂದ ಬಂದ ವರ್ತಕರು ಒಂದೆಡೆ ಸೇರಿ ಆ ಕಾಲದ ಜ್ಞಾನ, ವಿವರ, ವಾರ್ತೆಗಳನ್ನು ಹಂಚಿಕೊಳ್ಳುವ ವ್ಯವಸ್ಥೆ ಅಂದಿಗೂ ಇತ್ತು. ಅರೇಬಿಯಾದ ಜನರು ಉತ್ತಮ ವರ್ತಕರೂ ಆಗಿದ್ದರು. ಈ ಕಡೆ ಭಾರತದಿಂದಲೂ, ಆಯಾ ಕಡೆ ಗ್ರೀಕ್, ಈಜಿಪ್ಟ್ ಪ್ರದೇಶಗಳಿಂದಳು ಬರುತ್ತಿದ್ದ ಜನ ಇಂತಹ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಅದನ್ನು ಕಾಪಿ ಹೊಡೆದ ಪ್ರವಾದಿಯವರು ಅಲ್ಲಾಹುವಿನ ಹೆಸರಲ್ಲಿ ವಚನವಾಗಿ ಈ ವಿವರಗಳನ್ನು ಜನರಿಗೆ ತಿಳಿಸಿದ್ದರೆಂದು ನಿಸ್ಸಂಶಯವಾಗಿ ಹೇಳಬಹುದು. ಪಕ್ಕದ ಪುಸ್ತಕದಲ್ಲಿ ಇದ್ದ ತಪ್ಪು ಕಾಪಿ ಹೊಡೆಯುವಾಗ ಇಲ್ಲೂ ಬಂದದ್ದು ಅದಕ್ಕೆ ಸಾಕ್ಷಿ.

ಇಂದಿನ ಅನೇಕ ಇಸ್ಲಾಮಿಕ್ ವಿದ್ವಾಂಸರು ಕುರಾನಿನಲ್ಲಿ ವಿಜ್ಞಾನವನ್ನು ಹುಡುಕುವ ಪ್ರಕ್ರಿಯೆಯನ್ನು ನಿಲ್ಲಿಸಿದ್ದಾರೆ. ಅದರ ಪಾರ್ಶ್ವ ಪರಿಣಾಮಗಳು ಅವರಿಗೂ ಅರಿವಾಗುತ್ತಿದೆ. ಒಂದು ಕಾಲದಲ್ಲಿ ಇದನ್ನು ಬಳಸಿಕೊಂಡು ಮಾಡಿದ ಪ್ರಚಾರ ಇಂದು ಇಂಟರ್ನೆಟ್ ಯುಗದಲ್ಲಿ ಕಷ್ಟಸಾಧ್ಯವಾಗಿದೆ. ಕ್ಷಣದಲ್ಲೇ ಇಂಟರ್ನೆಟ್ ಬಳಸಿ ಸುಳ್ಳನ್ನು ಎಕ್ಸಪೋಸ್ ಮಾಡಲು ಸಾಧ್ಯವಿರುವುದರಿಂದ ಮತದ ಹೆಸರಲ್ಲಿ ಬೆಣ್ಣೆ ಹಚ್ಚುವ ಕಾರ್ಯ ಕಡಿಮೆಯಾಗುತ್ತಿದೆ. ಅತ್ತ ವಹಬೀಸಾಮ್ ನ ಕೇಂದ್ರವಾಗಿದ್ದ ಸೌದಿಗೂ ಇದು ಸಾಕಾಗಿದೆ. ಪ್ರಿಂಟಿಂಗ್ ಕ್ರಾಂತಿಯು ಕ್ರೈಸ್ತ ಮತಕ್ಕೆ ಯುರೋಪಿನಲ್ಲಿ ತಂದಿಟ್ಟ ಸ್ಥಿತಿಗಿಂತಲು ಭೀಕರ ಸ್ಥಿತಿ ಇಂಟರ್ನೆಟಿನಿಂದ ಕೆಲವು ದಶಕದಲ್ಲಿ ಇಸ್ಲಾಮಿನದ್ದಾಗಲಿದೆ.

ಒಬ್ಬ ವ್ಯಕ್ತಿ ತನ್ನ ನಂಬಿಕೆಯನ್ನು ನಿಜವೆಂದು ಮೊದಲೇ ನಿರ್ಧರಿಸಿ ಅದನ್ನು ಪ್ರೂವ್ ಮಾಡಲು ಸಾಕ್ಷಿಗಳನ್ನು ಹೇಗಾದರೂ ಸಂಗ್ರಹ ಮಾಡುವ, ತಿರುಚುವ ಮತ್ತು ಪುನರ್ ವ್ಯಾಖ್ಯಾನ ಮಾಡುವ ಪ್ರಕ್ರಿಯೆಗೆ “Confirmation bias” ಎಂದು ಹೆಸರು. ನಂಬಿಕೆಯ ಬೇರುಗಳು ಅಲುಗಾಡುವಾಗ ಇಂತಹ ಕ್ರಿಯೆಗಳು ಸಾಮಾನ್ಯ. ನಂಬಿಕೆಯನ್ನು ಗಟ್ಟಿಗೊಳಿಸಲು ಮಾಡುವ ಇಂತಹ ಕಾರ್ಯ ನಮಗೆ ತಿಳಿಯದಂತೆ ಭವಿಷ್ಯದಲ್ಲಿ ಅದೇ ನಂಬಿಕೆಗಳಿಗೆ ಕೊಳ್ಳಿಯಿಡುತ್ತದೆ. ಏನೇ ಆಗಲಿ ಕುರಾನಿನ ಇಸ್ಲಾಮಿಕ್ ಭ್ರೂಣಶಸ್ತ್ರ ಓದಿ ಯಾರಾದರೂ ಆ ಕಾಲದಲ್ಲೇ ಸಾವಿರಾರು ತಾಯಂದಿರ – ಕೂಸುಗಳ ಜೀವ ಉಳಿಸಿದ್ದರಾದರು ಕಣ್ಣು ಮುಚ್ಚಿ ಇದೇ ಮತದಲ್ಲಿ ಉಳಿಯಬಹುದಿತ್ತು. ಅದೂ ಇಲ್ಲ..

Similar Posts

Leave a Reply

Your email address will not be published. Required fields are marked *