ಕುರಾನಿನಲ್ಲಿರುವ ಅಂತರ್-ವಿರೋಧಗಳು; ಭಾಗ 2

ಕುರಾನಿನಲ್ಲಿರುವ ದ್ವಂದ್ವಗಳು, ವೈರುಧ್ಯಗಳು, ವಿರೋಧಾಭಾಸಗಳು, ತಪ್ಪುಗಳು ಮತ್ತು ಅತಾರ್ಕಿಕಕ ವಿಷಯಗಳನ್ನೆಲ್ಲಾ ತೆಗೆದು ಹಾಕಿದರೆ ಕುರಾನಿನಲ್ಲಿ ಏನು ಉಳಿದಿರುತ್ತದೆ ? ಬಹುಶಃ ಇವುಗಳ ಹೊರತಾಗಿ ಕುರಾನೇ ಇರುವುದಿಲ್ಲ. ಏಕೆಂದರೆ ಇವೆಲ್ಲವುಗಳಿಂದ ತುಂಬಿರುವುದೇ ಕುರಾನ್.
ಅಲ್ಲಾಹನ ಹೊರತಾಗಿ ಬೇರೆ ಯಾವ ನ್ಯಾಯಾಧೀಶನಾಗಲಿ, ತೀರ್ಪುಗಾರನಾಗಲಿ ಇಲ್ಲ ಮತ್ತು ಆತ ತನ್ನ ನಿರ್ಧಾರ ಅಥವಾ ಆಡಳಿತದಲ್ಲಿ ಯಾರನ್ನೂ ಪಾಲುದಾರಾನನ್ನಾಗಿ ಮಾಡಲು ಅವನು ಅನುಮತಿಸುವುದಿಲ್ಲ ಎಂದು ಕುರಾನ್ ಈ ಆಯತುಗಳಲ್ಲಿ ಹೇಳುತ್ತದೆ;
ಅಲ್ ಅನ್‌ಆಮ್(6).114—
‘‘ಅವನು (ಅಲ್ಲಾಹನು) ಸವಿಸ್ತಾರವಾದ ಗ್ರಂಥವನ್ನು ನಿಮ್ಮೆಡೆಗೆ ಇಳಿಸಿಕೊಟ್ಟಿರುವಾಗ, ನಾನೇನು ಅಲ್ಲಾಹನನ್ನು ಬಿಟ್ಟು ತೀರ್ಪುಗಾರನಾಗಿ ಬೇರೊಬ್ಬನನ್ನು ಹುಡುಕಬೇಕೇ ?’’ ಎಂದು ಕೇಳಿರಿ….”
ಅಲ್ ಕಹಫ್ (18).26—ಅವನು ತನ್ನ ಆಧಿಪತ್ಯದಲ್ಲಿ ಯಾರನ್ನೂ ಪಾಲುಗೊಳಿಸುವುದಿಲ್ಲ.
ಆದರೆ ಕುರಾನ್‌ನಲ್ಲಿ ಬೇರೆಡೆ ಮುಹಮ್ಮದ್ ಅಲ್ಲಾಹನ ನಿರ್ಧಾರಗಳು ಮತ್ತು ತೀರ್ಪುಗಳಲ್ಲಿ ಪಾಲುಧಾರನಾಗಿರುವುದು ಕಂಡು ಬರುತ್ತದೆ;
ಅನ್ನಿಸಾ(4).64-65—-(ದೂತರೇ,) ನಿಮ್ಮೊಡೆಯನಾಣೆ! ಅವರು ತಮ್ಮ ನಡುವೆ ವಿವಾದವಿರುವ ವಿಷಯಗಳಲ್ಲಿ “ನಿಮ್ಮನ್ನು ತೀರ್ಪುಗಾರರಾಗಿ ಒಪ್ಪುವ ತನಕ ಮತ್ತು ನಿಮ್ಮ ತೀರ್ಪಿನ ಕುರಿತು ತಮ್ಮ ಮನದಲ್ಲಿ ಯಾವುದೇ ಹಿಂಜರಿಕೆಯನ್ನು ಕಾಣದೆ ಅದನ್ನು ಮನಸಾರೆ ಒಪ್ಪಿಕೊಳ್ಳುವ ತನಕ” – ಅವರು ವಿಶ್ವಾಸಿಗಳಾಗುವುದಿಲ್ಲ.
ಅನ್ನಿಸಾ(4).59—-ವಿಶ್ವಾಸಿಗಳೇ, ಅಲ್ಲಾಹನ ಆದೇಶ ಪಾಲಿಸಿರಿ ಮತ್ತು ಅಲ್ಲಾಹನ ದೂತರ ಹಾಗೂ ನಿಮ್ಮ ಪೈಕಿ ಅಧಿಕಾರ ಸ್ಥಾನದಲ್ಲಿರುವವರ ಆದೇಶ ಪಾಲಿಸಿರಿ. ನೀವು ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಯಾವುದಾದರೂ ವಿಷಯದಲ್ಲಿ ನಿಮ್ಮ ನಡುವೆ ವಿವಾದ ಉಂಟಾದಾಗ, ಅದನ್ನು ಅಲ್ಲಾಹ್ ಮತ್ತವನ ದೂತರೆಡೆಗೆ ಮರಳಿಸಿರಿ. ಇದುವೇ ಅತ್ಯುತ್ತಮ ಧೋರಣೆಯಾಗಿದೆ ಹಾಗೂ ಇದರ ಪರಿಣಾಮವು ಉತ್ತಮವಾಗಿರುತ್ತದೆ.
ಮೇಲಿನ ಉಲ್ಲೇಖವು ಮುಹಮ್ಮದ್ ಸಹ ಅಲ್ಲಾಹ ಅಧಿಕಾರದಲ್ಲಿ ಪಾಲುಧಾರನಾಗಿ ಮಾಡಿದೆ. ಅಲ್ಲಾಹನ ಹೆಸರಿನೊಂದಿಗೆ ಮಹಮದನ ಹೆಸರು ತಳಕು ಹಾಕಿಕೊಂಡಿರುವುದನ್ನು ಗಮನಿಸಿ.
ಅಲ್ ಅಹ್‌ಝಾಬ್(33).36—-
ಅಲ್ಲಾಹನು ಮತ್ತು ಅವನ ದೂತರು ಒಂದು ವಿಷಯದಲ್ಲಿ ತೀರ್ಪು ನೀಡಿ ಬಿಟ್ಟ ಬಳಿಕ ವಿಶ್ವಾಸಿ ಪುರುಷರಿಗಾಗಲಿ ವಿಶ್ವಾಸಿ ಸ್ತ್ರೀಯರಿಗಾಗಲಿ ಆ ತಮ್ಮ ವಿಷಯದಲ್ಲಿ ಬೇರೆ ಯಾವುದೇ ಆಯ್ಕೆ ಉಳಿಯುವುದಿಲ್ಲ. ಅಲ್ಲಾಹ್ ಮತ್ತು ಅವನ ದೂತರ ಆದೇಶವನ್ನು ಮೀರಿ ನಡೆದವನು ಸ್ಪಷ್ಟವಾಗಿ ದಾರಿಗೆಟ್ಟವನಾಗಿದ್ದಾನೆ.
ಈ ಆಯತಿನಲ್ಲಂತೂ ಬಹಳ ಸ್ಪಷ್ಟವಾಗಿ ಅಲ್ಲಾಹನಿಗೆ ಸಮಾನವಾದ ಅಧಿಕಾರವನ್ನು ಮಹಮದನಿಗೆ ನೀಡಲಾಗಿದೆ. ಅಲ್ಲಾಹ ಮತ್ತು ಮಹಮದ್ ಸಮಾನ ಅಧಿಕಾರ ಮತ್ತು ಸಾಮರ್ಥ್ಯವನ್ನು ಸಾರುವ ಈ ಆಯತು ಮೊದಲನೇ ಆಯತುಗಳ ವಿರುದ್ಧವಾಗಿವೆ.